ನ್ಯೂಸ್ ನಾಟೌಟ್: ನಟ, ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಮೊದಲ ವರ್ಷದ ಪುಣ್ಯತಿಥಿ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಚಿತ್ರರಂಗದ ಗಣ್ಯರು ಗೌರವ ಸಲ್ಲಿಸಿದರು.
‘ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಪ್ರೀತಿಯ ‘ಅಪ್ಪು’, ಡಾ. ಪುನೀತ್ ರಾಜ್‌ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಪ್ರೀತಿ ಪೂರ್ವಕ ನಮನಗಳು. ಅತಿ ಚಿಕ್ಕ ವಯಸ್ಸಿನಲ್ಲಿ ಅವರು ಮಾಡಿದ ಸಾಧನೆ, ಗಳಿಸಿದ ಜನಪ್ರಿಯತೆ, ಕೈಗೊಂಡ ಜನಸೇವೆಯನ್ನು ವರ್ಣಿಸಲು ಪದಗಳೇ ಸಾಲದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
‘ಜನಮಾನಸದಲ್ಲಿ ಚಿರಸ್ಥಾಯಿ ಆಗಿರುವ ನೆಚ್ಚಿನ ಕಲಾವಿದ, ನಮ್ಮೆಲ್ಲರ ಪ್ರೀತಿಯ ‘ಅಪ್ಪು’, ಪುನೀತ್ ರಾಜಕುಮಾರ್ ಅವರ ಪ್ರಥಮ ಪುಣ್ಯತಿಥಿಯಂದು ಅವರಿಗೆ ಭಾವಪೂರ್ಣ ನಮನಗಳು. ಅವರ ಕಲಾವಂತಿಕೆ, ಹೃದಯವಂತಿಕೆಯ ವ್ಯಕ್ತಿತ್ವ ಎಂದೆಂದಿಗೂ ಅಜರಾಮರ’ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಪುನೀತ್ ಅಭಿಮಾನಿಗಳು ಗೌರವ ಸಲ್ಲಿಸಿದ್ದಾರೆ.


















