ನ್ಯೂಸ್ ನಾಟೌಟ್ : ಮದುವೆ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎನ್ನುವುದನ್ನು ಕೇಳಿದ್ದೇವೆ. ಆದರೆ ಕೆಲವೊಂದು ಮದುವೆ ಮಂಟಪದವರೆಗೆ ಬಂದು ನಿಂತು ಹೋಗುತ್ತದೆ ಅನ್ನುವುದು ಕೂಡ ಅಷ್ಟೇ ಸತ್ಯ. ಇಲ್ಲೊಂದು ಮದುವೆ ಕಥೆ ಕೂಡ ಅದೇ ಆಗಿದೆ. ಏನಿದು ಅನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಈ ಸ್ಟೋರಿಯನ್ನು ನೀವು ಓದಲೇಬೇಕು.
ಇಂದು (ಗುರುವಾರ ೯-೨-೨೦೨೩) ಸುಳ್ಯದ ಕೆವಿಜಿ ಪುರಭವನದಲ್ಲಿ ಮದುವೆಯೊಂದು ನಿಶ್ಚಯವಾಗಿತ್ತು. ಉಬರಡ್ಕದ ಯುವತಿ ಮದುವೆಗೆಂದು ಅಲಂಕಾರಗೊಂಡು ಮದುವೆ ಮಂಟಪಕ್ಕೆ ಕೂಡ ಬಂದಿದ್ದಳು. ಮದುಮಗನ ಕಡೆಯಿಂದಲೂ ಜನ ಬಂದು ಇಡೀ ಮಂಟಪವನ್ನು ಅಲಂಕಾರ ಮಾಡಿದ್ದರು. ಪುತ್ತೂರಿನ ರೆಂಜ ಗ್ರಾಮದ ಗುಮ್ಮಟಗದ್ದೆಯ ಕೃಷ್ಣ ಎಂಬಾತನೊಂದಿಗೆ ಮದುವೆ ನಿಗದಿಯಾಗಿತ್ತು. ಕೃಷ್ಣ ಬರುವನೆಂದು ಮದುಮಗಳು ಹಾಗೂ ನೆಂಟರಿಷ್ಟರು, ಜನರು ಕಾದಿದ್ದೇ ಬಂತು. ಎಷ್ಟು ಹೊತ್ತಾದರೂ ಕೃಷ್ಣ ಬರಲೇ ಇಲ್ಲ. ವರ ನಾಪತ್ತೆ ಅನ್ನುವ ಸುದ್ದಿಯೂ ಒಬ್ಬರಿಂದ ಒಬ್ಬರಿಗೆ ಹರಡುವುದಕ್ಕೆ ಶುರುವಾಯಿತು. ವರನ ನಂಬರ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಎಂದು ಬರುತ್ತಿತ್ತು. ವಧುವಿನ ಕಡೆಯವರು ಕೂಡ ಏನಿದು ಎಂದು ಆತಂಕಕ್ಕೆ ಒಳಗಾದರು. ಕೂಡಲೇ ಸುಳ್ಯ ಪೊಲೀಸ್ ಠಾಣೆಗೂ ವಿಷಯ ತಿಳಿಸಲಾಯಿತು. ಈ ವೇಳೆ ಗೊತ್ತಾದ ವಿಚಾರವೆಂದರೆ ಆ ವರನಿಗೆ ಈ ಹಿಂದೆ ಒಂದು ಮದುವೆಯಾಗಿದ್ದು, ಅವನ ಹೆಂಡತಿ ಗಂಡನ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಲು ಹೋಗಿದ್ದಾಳೆ ಎಂದು. ಇನ್ನು ಈ ಮದುವೆ ಆಗುವುದಿಲ್ಲವೆಂದು ತಿಳಿದು ವಧುವಿನ ಕಡೆಯವರು ಸಭಾಂಗಣದಿಂದ ತೆರಳಿದರು. ಸಿದ್ಧಗೊಂಡಿದ್ದ ಊಟವನ್ನು ಹಾಸ್ಟೆಲ್ ಗಳಿಗೆ ಕೊಡುವುದೆಂದು ನಿರ್ಧರಿಸಿದರು. 500 ಮಂದಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.


















