ನ್ಯೂಸ್ ನಾಟೌಟ್: ಮತ್ತೆ ವಂದೇ ಭಾರತ್ ರೈಲಿನ ಮೇಲೆ ಮತ್ತೊಮ್ಮೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ವಿಶಾಖಪಟ್ಟಣಂನಲ್ಲಿ ಜನವರಿ 19 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಬೇಕಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ಕೋಚ್‌ನ ಎರಡು ಕಿಟಕಿಯ ಗಾಜುಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಕಂಚರಪಾಲೆಂ ಬಳಿ ರೈಲು ನಿರ್ವಹಣೆಗಾಗಿ ನಿಂತಿದ್ದಾಗ ಈ ಘಟನೆ ನಡೆದಿದೆ.
ಬುಧವಾರ ಸಂಜೆ 6:30 ಕ್ಕೆ ವಿಶಾಖಪಟ್ಟಣಂನಲ್ಲಿ ವಂದೇ ಭಾರತ್ ರೈಲಿಗೆ ಯಾರೋ ಕಲ್ಲು ತೂರಾಟ ನಡೆಸಿದರು. ಎರಡು ಕಿಟಕಿ ಗಾಜುಗಳು ಸಂಪೂರ್ಣವಾಗಿ ಒಡೆದುಹೋಗಿದ್ದು ಇದನ್ನು ಬದಲಾಯಿಸಬೇಕಾಗಿದೆ. ಇದು ಅತ್ಯಂತ ದುರದೃಷ್ಟಕರ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅನುಪ್ ಕುಮಾರ್ ಹೇಳಿದ್ದಾರೆ. ಈ ರೈಲು ಸಿಕಂದರಾಬಾದ್ ಮತ್ತು ವಿಶಾಖಪಟ್ಟಣಂ ನಡುವೆ ಚಲಿಸಲಿದೆ. ವಾರಂಗಲ್, ಖಮ್ಮಂ, ವಿಜಯವಾಡ ಮತ್ತು ರಾಜಮಂಡ್ರಿಯಲ್ಲಿ ನಿಲುಗಡೆಯಿದೆ. ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ವಂದೇ ಭಾರತ್ ರೈಲು ಸೇವೆ ಆರಂಭಿಸಿದ ನಾಲ್ಕೇ ದಿನಕ್ಕೆ ಕಲ್ಲು ತೂರಾಟ ನಡೆದಿತ್ತು. ಜನವರಿ 3 ಮತ್ತು 4 ರಂದು ಹೌರಾ- ಜಲಪೈಗುರಿ ನಡುವೆ ಆರಂಭಗೊಂಡಿದ್ದ ರೈಲಿಗೆ ಕಲ್ಲು ಎಸೆಯಲಾಗಿತ್ತು.


















