ನ್ಯೂಸ್ ನಾಟೌಟ್ : ಶಾಸಕ ಎಂ.ಪಿ. ರೇಣುಕಾಚಾರ್ಯ ಬಲಗೈನಂತಿದ್ದು ಎಲ್ಲ ಕೆಲಸ ನಿರ್ವಹಿಸುತ್ತಿದ್ದ ತಮ್ಮನ ಮಗ ಚಂದ್ರಶೇಖರ್ ಸಾವಿನ ಹಿಂದೆ ಈಗ ಹತ್ಯೆಯ ಸಂಚಿನ ಅನುಮಾನ ಹುಟ್ಟಿಕೊಂಡಿದೆ.
ಸ್ವತಃ ರೇಣುಕಾಚಾರ್ಯ ಅವರೇ ಮಗನ ಹತ್ಯೆ ನಡೆದಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ರೇಣುಕಾಚಾರ್ಯ , ರಾಜಕೀಯ ದ್ವೇಷಕ್ಕೆ ಹತ್ಯೆ ನಡೆದಿದೆ. ಕಾರು ಅಪಘಾತ ನಡೆದಿರುವ ಜಾಗ ನೋಡಿದರೆ ಅಲ್ಲಿ ಅಪಘಾತ ಆಗುವ ಸಾಧ್ಯತೆಯೇ ಇಲ್ಲ.ಚಂದ್ರಶೇಖರ್ ದೇಹ ಹಿಂದಿನ ಸೀಟಿನಲ್ಲಿತ್ತು. ತಲೆಗೆ ಹೊಡೆದಿದ್ದಾರೆ. ಕಿವಿ ಗಾಯಗೊಳಿಸಿದ್ದಾರೆ. ಚಿತ್ರಹಿಂಸೆ ಮಾಡಿ ಕಾಲಿಗೆ ಹಗ್ಗ ಕಟ್ಟಿ ಕೊಂದು ಹಾಕಿ ಕಾರು ಸಹಿತ ಕ್ಯಾನಲ್ ಗೆ ತಂದು ಬಿಸಾಕಿದ್ದಾರೆ ಎಂದು ಕಣ್ಣೀರು ಹಾಕಿದರು.
ಕಳೆದ ಕೆಲವು ದಿನಗಳ ಹಿಂದೆ ನನಗೆ ಪ್ರಾಣ ಬೆದರಿಕೆ ಇತ್ತು. ಈ ಬಗ್ಗೆ ನಾನು ಬಹಿರಂಗವಾಗಿ ಹೇಳಿಕೊಂಡಿದ್ದೆ. ಏಳಿಗೆ ಸಹಿಸಿಕೊಳ್ಳಲಾಗದೆ ನನ್ನ ಬದಲಿಗೆ ನನ್ನ ಮಗನನ್ನು ಬಲಿ ತೆಗೆದುಕೊಂಡಿದ್ದಾರೆ ಶಿಖಂಡಿಗಳು. ನನ್ನ ರಾಜಕೀಯ ಸ್ವಾರ್ಥಕ್ಕಾಗಿ ಮಗನ ಬಲಿ ತೆಗೆದುಕೊಂಡೆ. ನಾನು ಪಾಪಿ ಎಂದು ರೇಣುಕಾಚಾರ್ಯ ಗೊಳಾಡಿದ್ದಾರೆ. ನಾನು ಬೌನ್ಸರ್ ಗಳಿಲ್ಲದೆ ನಡೆದಾಡುತ್ತೇನೆ. ಆ ಮಗುವನ್ನು ಬಲಿ ತೆಗೆದುಕೊಳ್ಳುವ ಬದಲು ಗಂಡಸಾಗಿದ್ದರೆ ನನ್ನನ್ನು ಬಲಿ ತೆಗೆದುಕೊಳ್ಳಬಹುದಿತ್ತು ಎಂದು ರೇಣುಕಾಚಾರ್ಯ ತಿಳಿಸಿದರು. ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ರೇಣುಕಾಚಾರ್ಯ ತಮ್ಮನ ಮಗನ ಶವ ಸೇತುವೆಯೊಂದರ ಕೆಳಗೆ ನೀರಿನಲ್ಲಿ ಪತ್ತೆಯಾಗಿತ್ತು. ಈ ಸಾವಿನ ಸುತ್ತ ಹಲವು ಅನುಮಾನಗಳು ಎದ್ದಿವೆ. ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.


















