ನ್ಯೂಸ್ ನಾಟೌಟ್: ಸತ್ಯವನ್ನು ಹುಡುಕಿ ಅದನ್ನು ಪಠ್ಯಕ್ರಮದಲ್ಲಿ ಅಳವಡಿಸಿ ಮಕ್ಕಳಿಗೆ ಕಲಿಸಬೇಕು. ಐಡಿಯಾಲಜಿಗಳನ್ನು ಅವರಿಗೆ ಕಲಿಸಬಾರದು. ಈ ನಿಟ್ಟಿನಲ್ಲಿ ಸರ್ಕಾರವು ಪಠ್ಯಕ್ರಮ ಬದಲಾವಣೆಗೆ ಮುಂದಾದರೆ ಕೆಲವರು ನಾನಾ ರೀತಿಯಲ್ಲಿ ಗಲಾಟೆ ಮಾಡುತ್ತಿದ್ದಾರೆ. ನಮ್ಮ ದೇಶದಲ್ಲಿ ಹೀಗೇಕೆ ಆಗುತ್ತಿದೆ? ಎಂದು ಕಾದಂಬರಿಕಾರ ಎಸ್.ಎಲ್. ಭೈರಪ್ಪ ಕೇಳಿದರು.
ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ಕೆಲವರು ತೆಗೆದಿರುವ ತಗಾದೆಯಿಂದ ಮತ್ತು ಮಾಡುತ್ತಿರುವ ಗಲಾಟೆಯಿಂದ ಸರ್ಕಾರದ ಮೇಲೆ ಸಹಜವಾಗಿಯೇ ಒತ್ತಡ ಆಗುತ್ತದೆ ಎಂದರು. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಮನೆಗೆ ಕೆಲವರು ಬೆಂಕಿ ಹಚ್ಚಲು ಹೋಗಿದ್ದಾರೆ. ಪೊಲೀಸರು ಇದ್ದಿದ್ದರಿಂದ ಬೆಂಕಿ ಹಚ್ಚುವುದು ತಪ್ಪಿದೆ. ಯಾರದ್ದಾದರೂ ಬೆಂಬಲ ಇದ್ದವರಷ್ಟೆ ಬೆಂಕಿ ಹಾಕುವ ಕೆಲಸ ಮಾಡುತ್ತಾರೆಯೇ ಹೊರತು, ಯಾರೋ ಹುಡುಗರು ಮಾಡುವುದಿಲ್ಲ ಎಂದರು. ಹೀಗಾದರೆ, ದೇಶದಲ್ಲಿ ಐಕ್ಯತೆ ಬರುವುದು ಯಾವಾಗ, ನಮ್ಮ ಸ್ವಾತಂತ್ರ್ಯ ಉಳಿಸಿಕೊಳ್ಳುವುದು ಯಾವಾಗ ಎಂದು ಪ್ರಶ್ನಿಸಿದರು.


















