ನಮಗೆ ಬಸ್‌ನಲ್ಲಿ ಪ್ರಯಾಣಿಸಲು ಟಿಕೆಟ್ ಬೇಕು ಅಥವಾ ಬಸ್‌ಪಾಸ್ ಬೇಕು. ಅಂತೆಯೆ ನಾವು ಭಾರತೀಯರು ಎಂದು ಗುರುತಿಸಿಕೊಳ್ಳಲು ಓಟರ್ ಐಡಿ, ಆಧಾರ್ ಕಾರ್ಡ್ ಅಥವಾ ವಾಹನ ಚಾಲನಾ ಪರವಾನಿಗೆ ಇರುವುದು. ಅಂತೆಯೆ ವಿದೇಶಗಳಿಗೆ ಪ್ರಯಾಣಿಸಬೇಕಾದರೆ ಗುರುತಿಸಿಕೊಳ್ಳಲು ಸಹಕಾರಿಯಾಗುವುದೇ ಪಾಸ್‌ಪೋರ್ಟ್. ಈ ಪಾಸ್‌ಪೋರ್ಟ್ ಇನ್ನೇನು ಕೆಲವೇ ದಿನಗಳಲ್ಲಿ ಇ-ಪಾಸ್‌ಪೋರ್ಟ್ ರೂಪದಲ್ಲಿಯೂ ಲಭ್ಯ ಇದ್ದು, ಪಾಸ್‌ಪೋರ್ಟ್, ಇ-ಪಾಸ್‌ಪೋರ್ಟ್ ಎಂದರೆ ಏನು,ಅದರ ಉಪಯೋಗಗಳು ಇತ್ಯಾದಿ ಕುರಿತು ಸಮಗ್ರವಾಗಿ ತಿಳಿಯೋಣವಂತೆ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತಾವಧಿಯಲ್ಲಿ ಭಾರತ ಇಂದು ಸಂಪೂರ್ಣ ಡಿಜಿಟಲೀಕರಣದತ್ತ ಸಾಗಲಾರಂಭಿಸಿದೆ. ಡಿಜಿಟಲ್ ಬ್ಯಾಂಕಿಂಗ್,ಆನ್ ಲೈನ್ ಪೇಮೆಂಟ್, ಆನ್‌ಲೈನ್ ಡಾಕ್ಯುಮೆಂಟಲ್ ಸ್ಟೋರೇಜ್ ಸಹಿತ ವಿವಿಧ ಡಿಜಿಟಲೀಕರಣದ ಮಜಲುಗಳನ್ನು ಉತ್ತೇಜಿಸಲಾರಂಭಿಸಿದೆ. ಇದಕ್ಕೆ ಇತ್ತೀಚೆಗಷ್ಟೆ ಹೊಸದಾಗಿ ಸೇರ್ಪಡೆಯಾಗಿರುವುದು ಇ-ಪಾಸ್‌ಪೋರ್ಟ್ ವ್ಯವಸ್ಥೆ.
2022-23ನೇ ಸಾಲಿನ ಬಜೆಟ್ ನಲ್ಲಿಯೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಕೂಡ ನಾಗರಿಕರ ಹಿತದೃಷ್ಠಿಯಿಂದ ಇ-ಪಾಸ್‌ಪೋಟ್ ಸೇವಯನ್ನು ಶೀಘ್ರವೇ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.ಅಂತರಾಷ್ಟ್ರೀಯ ಮಾರ್ಗಸೂಚಿಗಳ ಹಾಗೂ ನಿಯಮಗಳ ಅನ್ವಯ ಕೇಂದ್ರ ಸರ್ಕಾರ ಶೀಘ್ರವೇ ಇ-ಪಾಸ್‌ಪೋರ್ಟ್ ಸೇವೆಯನ್ನು ಪ್ರಾರಂಭಿಸಲಿದೆ.
ಇ-ಪಾಸ್‌ಪೋರ್ಟ್ ನಕಲಿ ಪಾಸ್‌ಪೋರ್ಟ್ ಹಾವಳಿಗೆ ಸಂಪೂರ್ಣ ತಡೆ ಒಡ್ಡುವುದೂ ಅಲ್ಲದೆ ಜಾಗತಿಕ ಮಟ್ಟದಲ್ಲಿ ವಲಸೆ ಪ್ರಕ್ರಿಯೆಯನ್ನು ಅತಿ ವೇಗವಾಗಿ ಮುಗಿಸಲು ನೆರವು ನೀಡುತ್ತದೆ. ಇ-ಪಾಸ್‌ಪೋರ್ಟ್ ಎಂದರೆ ಏನು, ಅದರ ಕಾರ್ಯವೈಖರಿ ಬಗೆ ಹೇಗೆ,ಅದರಿಂದ ಉಪಯೋಗ ಏನು ಎಂಬುದರ ಕುರಿತು ತಿಳಿಯೋಣ ಬನ್ನಿ. ಭಾರತದಲ್ಲಿ ಇದೇ ಮೊದಲ ಬಾರಿಗೆ ಜಾರಿಗೆ ಬರಲಿರುವ ಇ-ಪಾಸ್‌ಪೋರ್ಟ್ ವ್ಯವಸ್ಥೆ ಈಗಾಗಲೇ ಅಮೆರಿಕಾ, ಯೂರೋಪ್,ಜರ್ಮನಿ ಸಹಿತ 120 ದೇಶಗಳಲ್ಲಿ ಇ-ಪಾಸ್‌ಪೋರ್ಟ್ ವ್ಯವಸ್ಥೆ ಬಳಕೆಯಲ್ಲಿದೆ. ಇ-ಪಾಸ್‌ಪೋರ್ಟ್ ಹೊಸ ತಂತ್ರಜ್ಞಾನದಿಂದ ಕೂಡಿರಲಿದ್ದು, ಭದ್ರತೆ ದೃಷ್ಠಿಯಿಂದ ಹೆಚ್ಚು ಸುರಕ್ಷತೆ ಕ್ರಮಗಳನ್ನು ಹೊಂದಿರುವುದು. ಪ್ರಸಕ್ತ ವರ್ಷದ ಸಾಲಿನಿಂದ ಈ ಸೇವೆ ಪ್ರಾರಂಭವಾಗಲಿದೆ ಹಾಗೂ ಅರ್ಜಿಗಳು ದೊರೆಯಲಿವೆ. ಮುಂದಿನ ದಿನಗಳಲ್ಲಿ ಹೊಸದಾಗಿ ಪಾಸ್‌ಪೋರ್ಟ್ ಮಾಡಿಸಿಕೊಳ್ಳುವವರಿಗೆ ಹಾಗೂ ಪಾಸ್‌ಪೂರ್ಟ್ ನವೀಕರಣಗೊಳಿಸುವವರಿಗೆ ಹೊಸ ಮಾದರಿಯಾದ ಇ-ಪಾಸ್‌ಪೋರ್ಟ್ ರೂಪದಲ್ಲಿ ದೊರೆಯಲಿದೆ.
ಇ-ಪಾಸ್‌ಪೋರ್ಟ್ನಲ್ಲಿ ಇಲೆಕ್ಟ್ರಾನಿಕ್ ಚಿಪ್ ಇರಲಿದ್ದು, ಡೇಟಾ ಸುರಕ್ಷತೆಗೆ ಸಹಾಯವಗಲಿದೆ. ಇದರಲ್ಲಿ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಹಾಗೂ ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದು ಭೌತಿಕ ಪಾಸ್‌ಪೋರ್ಟ್ ಗಿಂತ ಭಿನ್ನವಾಗಿರಲಿದ್ದು, ಸುರಕ್ಷಿತವಾಗಿರಲಿದೆ ಹಾಗೂ ಪ್ರಯಾಣದ ವೇಳೆ ಪಾಸ್‌ಪೋರ್ಟ್ ಪರಿಶೀಲನೆಗೆ ಹೆಚ್ಚು ಸಮಯ ವ್ಯರ್ಥಗೊಳಿಸುವುದು ಇನ್ನು ಮುಂದೆ ಇಲ್ಲವಾಗಿದೆ. ಇದರಿಂದ ನಕಲಿ ಪಾಸ್‌ಪೋರ್ಟ್ ಹಾವಳಿಗಳ ತಡೆ ಹಿಡಿಯಬಹುದಾಗಿದೆ.
ಇನ್ನು ಇ-ಪಾಸ್‌ಪೋರ್ಟ್ ಹೇಗೆ ಕಾರ್ಯನಿರ್ವಹಿಸಲಿದೆ ಎಂದು ಮುಖ್ಯವಾಗಿ ತಿಳಿದುಕೊಳ್ಳೋಣ ಬನ್ನಿ. ಇ-ಪಾಸ್‌ಪೋರ್ಟ್ ಹಿಂಭಾಗದಲ್ಲಿ ವಿದ್ಯುನ್ಮಾನ ಸಿಲಿಕಾನ್ ಚಿಪ್‌ನ್ನು ಅಳವಡಿಸಲಾಗಿದ್ದು, 64ಕೆಬಿ ಮೆಮೊರಿಯನ್ನು ಸಂಗ್ರಹಿಸಬಹುದಾಗಿದೆ. ಪಾಸ್‌ಪೋರ್ಟ್ ಹೊಂದಿರುವವರ ಭಾವಚಿತ್ರ, ಬಯೋಮೆಟ್ರಿಕ್ ಸಹಿತ ಸಂಪೂರ್ಣ ವಿವರಗಳನ್ನು ಇದರಲ್ಲಿ ಸಂಗ್ರಹಿಸಲಾಗುತ್ತದೆ. ಪ್ರಯಾಣಿಕರ ಒಟ್ಟು 30 ಪ್ರಯಾಣದ ವಿವರಗಳನ್ನು ಇ-ಪಾಸ್‌ಪೋರ್ಟ್ನಲ್ಲಿ ಸಂಗ್ರಹಿಸಿಡಬಹುದು.
ಇನ್ನು ಇ-ಪಾಸ್‌ಪೋರ್ಟ್ನಿಂದ ಹಲವಾರು ಉಪಯುಕ್ತ ಪ್ರಯೋಜನಗಳೂ ಇವೆ. ಪಾಸ್‌ಪೋರ್ಟ್ ನಕಲಿ ಪ್ರತಿ ತಯಾರಿಸಿ ಅದನ್ನು ದುಷ್ಕೃತ್ಯಕ್ಕೆ ಬಳಸುವುದು ತಪ್ಪಲಿದೆ. ಭೌತಿಕ ಪಾಸ್‌ಪೋಟ್ ಗಿಂತ ಇದು ವಿಭಿನ್ನವಾಗಿರಲಿದ್ದು, ಸುರಕ್ಷಿತವಾಗಿಯೂ ಇರುತ್ತದೆ. ಪ್ರಯಾಣಿಕರು ತಮ್ಮ ಪಾಸ್‌ಪೋರ್ಟ್ ನಲ್ಲಿರುವ ಸಂಪೂರ್ಣ ವಿವರಗಳು ಇ-ಪಾಸ್‌ಪೋಟ್ ನಲ್ಲಿಯೂ ಲಭ್ಯವಿದ್ದು, ಪ್ರಯಾಣದ ವೇಳೆ ಅಥವಾ ಇತರ ಸಂದರ್ಭದಲ್ಲಿ ಪಾಸ್‌ಪೋರ್ಟ್ ಮೂಲ ಪ್ರತಿ ಕಳೆದುಕೊಂಡರೂ ಕಳವಳಗೊಳ್ಳಬೇಕಿಲ್ಲ. ಇನ್ನೂ ಮುಖ್ಯವೆಂದರೆ ಒಂದೊಮ್ಮೆ ಪಾಸ್‌ಪೋರ್ಟ್ ತಪಾಸಣೆಯಿಂದಾಗಿ ವಿಮಾನದ ಬಳಿ ತಲುಪಲು ಅಸಾಧ್ಯವಾದ ಪ್ರಯಾಣಿಕರಿಗೆ ಇನ್ನು ತಪಾಸಣೆಯ ವಿಳಂಬದ ಕುರಿತು ಚಿಂತೆ ಇಲ್ಲವಾಗಿದೆ. ಇ-ಪಾಸ್‌ಪೋರ್ಟ್ನಲ್ಲಿ ಅಳವಡಿಸಲಾದ ಚಿಪ್ ನೇರ ರಡಾರ್ ನ್ನು ಸಂಪರ್ಕಿಸಲಿದ್ದು,ಸ್ವಯಂ ಚಾಲಿತವಾಗಿ ಮಾಹಿತಿ ಸರ್ಕಾರಕ್ಕೆ ರವಾನೆಯಾಗಲಿದೆ. ಇದು ಡಿಜಿಟಲ್ ಇಂಡಿಯಾಕ್ಕೆ ಸರ್ಕಾರ ಕೈಗೊಂಡಿರುವ ಮತ್ತೊಂದು ಮಹತ್ವದ ನಿರ್ಧಾರವಾಗಿದೆ.


















