ಬೆಂಗಳೂರು: ಕರ್ನಾಟಕ ಗಡಿ ಮತ್ತು ರಾಜ್ಯ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ಹಾಗೂ ರಾಜ್ಯ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಶನಿವಾರ ತಡರಾತ್ರಿ ನಿಧನರಾದರು.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಸಮೀಪದಲ್ಲಿನ ಅವರ ಸ್ವಗೃಹದಲ್ಲಿ ಶನಿವಾರ ರಾತ್ರಿ 12 ಗಂಟೆ ವೇಳೆಯಲ್ಲಿ ಹೃದಯಾಘಾತದಿಂದ ಹಠಾತ್ ಕೊನೆಯುಸಿರು ಎಳೆದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿಯಾಗಿ 14 ವರ್ಷ 4 ತಿಂಗಳ ಕಾಲ ವಿವಿಧ ಸ್ತರಗಳಲ್ಲಿ ದುಡಿದಿದ್ದ ಅವರು ವಿಭಾಗೀಯ ಪೀಠದ ನ್ಯಾಯಮೂರ್ತಿಯಾಗಿದ್ದಾಗಲೇ ಸುಮಾರು 10 ಸಾವಿರ ತೀರ್ಪುಗಳನ್ನು ನೀಡಿದ್ದರು. ವಕೀಲರಾಗಿ, ನ್ಯಾಯಮೂರ್ತಿಯಾಗಿ ಅಪಾರ ಜನಪ್ರೀತಿ ಗಳಿಸಿದ್ದ ಅವರು ಹೈಕೋರ್ಟ್ ನಲ್ಲಿ ವಕೀಲರ ಗುಮಾಸ್ತರ ಸಂಘದ ಹುಟ್ಟಿಗೆ ಕಾರಣರಾಗಿದ್ದರು.


















