ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಸುತ್ತ ಜನವೋ ಜನ…ಒಂದು ಸಮಯವೂ ವಿಶ್ರಾಂತಿ ಇರಲಿಲ್ಲ. ಜತೆಗೆ ರಾಜ್ಯದ ಬೇರೆ ಬೇರೆ ಕಡೆ ಪ್ರವಾಸ. ಆದರೆ ಈಗ ಮುಖ್ಯಮಂತ್ರಿ ಖುರ್ಚಿಯಿಂದ ಕೆಳಕ್ಕೆ ಇಳಿದ ಬಳಿಕ ಯಡಿಯೂರಪ್ಪ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ ಅನ್ನುತ್ತವೆಮೂಲಗಳು.
ಹೌದು, ಯಡಿಯೂರಪ್ಪ ಸಿಎಂ ಆದ ಬಳಿಕ ಅತಿಯಾದ ನೆರೆ, ಜಗತ್ತನ್ನೇ ಕಾಡಿದ ಕೋವಿಡ್ ಕಾರಣದಿಂದ ಸುಮ್ಮನೆ ಕೂರುವುದಕ್ಕೆ ಸಾಧ್ಯವಾಗಿರಲಿಲ್ಲ. ಮೊದಲು ಅಧಿಕಾರ ಹಿಡಿಯುವುದಕ್ಕೆ ಶ್ರಮಪಟ್ಟ ಯಡಿಯೂರಪ್ಪ ಕೊನೆಗೆ ಅಧಿಕಾರ ಉಳಿಸಿಕೊಳ್ಳುವ ಹೋರಾಡಿದರು. ಹೀಗಾಗಿ ವೈಯಕ್ತಿಕ ಖುಷಿ ಮನೋಲ್ಲಾಸದ ಬಗ್ಗೆ ಗಮನ ಹರಿಸುವುದಕ್ಕೆ ಸಮಯ ಇರಲಿಲ್ಲ. ಆದರೆ ಈಗ ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೆ ಯಡಿಯೂರಪ್ಪ ಬಹುತೇಕ ರಿಲ್ಯಾಕ್ಸ್ ಆಗಿದ್ದಾರೆ. ಕೋವಿಡ್ ಸಮಯದಲ್ಲಿ ದೂರದರ್ಶನ ವಾಹಿನಿಯಲ್ಲಿ ಮರು ಪ್ರಸಾರವಾದ ‘ಮಹಾಭಾರತ’ ಸೀರಿಯಲ್ ಅನ್ನು ಯಡಿಯೂರಪ್ಪ ಮನಸ್ಸಿಟ್ಟು ನೋಡಿದ್ದರು. ಇದೀಗ ಮತ್ತೆ ಅಂಥದ್ದೇ ಹಳೆಯ ಸೀರಿಯಲ್ಗಳನ್ನು ಯಡಿಯೂರಪ್ಪ ನೋಡತೊಡಗಿದ್ದಾರೆ. ‘ಮಾಯಾಮೃಗ’, ‘ಮುಕ್ತ ಮುಕ್ತ’ ಧಾರಾವಾಹಿಗಳನ್ನು ತರಿಸಿಕೊಂಡು ನೋಡಿರುವ ಯಡಿಯೂರಪ್ಪ, ‘ಮಗಳು ಜಾನಕಿ’ ಧಾರಾವಾಹಿಯನ್ನೂ ನೋಡತೊಡಗಿದ್ದಾರೆ. ಸ್ವತಃ ‘ಮಗಳು ಜಾನಕಿ’ ಧಾರವಾಹಿಯ ನಿರ್ದೇಶಕ ಟಿ.ಎನ್. ಸೀತಾರಾಮ್ ತಾವೇ ಹಾರ್ಡ್ ಡಿಸ್ಕ್ನಲ್ಲಿ ತಮ್ಮ ಧಾರಾವಾಹಿಗಳನ್ನು ಯಡಿಯೂರಪ್ಪ ಅವರಿಗೆ ಕಳುಹಿಸಿದ್ದಾರೆ. ಅವುಗಳನ್ನು ವೀಕ್ಷಿಸುತ್ತ ಯಡಿಯೂರಪ್ಪ ಅತ್ಯಂತ ನಿರಾಳರಾಗಿ ಸಮಯ ಕಳೆಯುತ್ತಿದ್ದಾರೆ.










