ಮಂಗಳೂರು: ಸಾಹಿತ್ಯ ಕ್ಷೇತ್ರದ ಗಣನೀಯ ಸಾಧನೆ ಮಾಡಿರುವ ಬರಹಗಾರ ಪ.ರಾಮಕೃಷ್ಣ ಶಾಸ್ತ್ರಿಯವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ಈ ಲಭಿಸಿದೆ. ರಾಮಕೃಷ್ಣ ಶಾಸ್ತ್ರಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆ ಗಮನಿಸಿ ಪುರಸ್ಕಾರ ನೀಡಲಾಗಿದೆ. ಪ.ರಾ.ಶಾಸ್ತ್ರಿ ಎಂದೇ ಪ್ರಸಿದ್ಧರಾಗಿರುವ ಅವರು ರಾಜ್ಯದ ಅನೇಕ ಪತ್ರಿಕೆಗಳಿಗೆ ವರದಿ ಮಾಡಿದ್ದಾರೆ. ಹೂವು, ಹಣ್ಣು, ಗಿಡ ಮರ-ಸಸಿಗಳ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಶಾಸ್ತ್ರಿಗಳು ತಮ್ಮ ಬರಹದಿಂದ ಅವುಗಳನ್ನೆಲ್ಲ ಓದುಗರಿಗೆ ಮನಮುಟ್ಟುವಂತೆ ಪರಿಚಯಿಸುವುದರಲ್ಲಿ ಸಿದ್ಧಹಸ್ತರು. ಮೂಲತಃ ಬೆಳ್ತಂಗಡಿಯವರಾದ ಶಾಸ್ತ್ರಿ ಗಳು ಇದುವರೆಗೆ ಹನ್ನೆರಡು ಸಾವಿರಕ್ಕೂ ಅಧಿಕ ಲೇಖನ ಬರೆದಿದ್ದಾರೆ. ಅಲ್ಲದೆ ಮಕ್ಕಳಿಗಾಗಿ ಕಥಾ ಸಂಕಲನ, ಸಾಮಾಜಿಕ ಕಥಾ ಸಂಕಲನ, ಹಾಸ್ಯ ಲೇಖನ ಸಂಗ್ರಹ, ಜೀವನ ಚರಿತ್ರೆ, ವಯಸ್ಕರ ಶಿಕ್ಷಣಕ್ಕಾಗಿ ಪುಸ್ತಕಗಳು, ಮಹಿಳೆಯರಿಗಾಗಿ ಕೈಪಿಡಿ, ತುಳುವಿನಲ್ಲಿ ಪಣಿಯಾಡಿ ಪ್ರಶಸ್ತಿ ಪಡೆದ ಕಾದಂಬರಿ , ಕನ್ನಡ ಕಾದಂಬರಿ ಗ್ರಾಮಾಭಿವೃದ್ಧಿ ಯೋಜನೆಗಾಗಿ ಕೈಪಿಡಿ, ಮಕ್ಕಳಿಗಾಗಿ ಭಾಗವತ, ವಿಜ್ಞಾನ ಪುಸ್ತಕ , ವೈಚಾರಿಕ ಲೇಖನಗಳ ಪುಸ್ತಕ ಸೇರಿದಂತೆ ಹಲವಾರು ಪುಸಕ್ತಗಳನ್ನು ಬರೆದ ಸಾಧನೆ ಮಾಡಿದ್ದಾರೆ.










