ನ್ಯೂಸ್ ನಾಟೌಟ್: ಮಳೆಗಾಲ ಶುರುವಾಯಿತೆಂದರೆ ಸಾಕು ಎಲ್ಲೆಂದರಲ್ಲಿ ಸೊಳ್ಳೆಗಳ್ಳದ್ದೇ ಕಾಟ. ಈ ಸೊಳ್ಳೆ ಕಾಟಕ್ಕೆ ಹೈರಾಣಾರಾಗದವರೇ ಇಲ್ಲ. ಅದರಲ್ಲೂ ಕೆಲವು ಸೊಳ್ಳೆಗಳು ಮನುಷ್ಯನ ಜೀವವನ್ನೇ ತೆಗೆಯುವಷ್ಟು ಅಪಾಯಕಾರಿಯಾಗಿದೆ. ಅಂತಹ ಸೊಳ್ಳೆಗಳ ಮಟ್ಟ ಹಾಕಲು ಇದೀಗ ಯೋಧ ಸೊಳ್ಳೆಯೊಂದನ್ನು ಪುದುಚೇರಿಯ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಕೀಟ ನಿಯಂತ್ರಣ ಸಂಶೋಧನಾ ಕೇಂದ್ರವು(ಇ ಇ ಆರ್ ಸಿ) ಆವಿಷ್ಕರಿಸುತ್ತಿದೆ.
ಹೌದು, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಮಾತಿನಂತೆ, ಡೆಂಗಿ ಮತ್ತು ಚಿಕುನ್ ಗುನ್ಯಾ ಹರಡುವ ಸೊಳ್ಳೆಗಳ ಸಂತಾನವನ್ನೇ ತಡೆದು ಸೋಂಕಿಲ್ಲದ ಸೊಳ್ಳೆಗಳ ಉತ್ಪಾದನೆಗೆ ಸಂಸ್ಥೆ ಮುಂದಾಗಿದೆ. ಸಂಶೋಧಕರ ಪ್ರಕಾರ, ಅವರು ಪ್ರಯೋಗಾಲಯದಲ್ಲಿ ಸೃಷ್ಟಿಸಿರುವ ಹೆಣ್ಣು ಸೊಳ್ಳೆಗಳನ್ನು ಪರಿಸರಕ್ಕೆ ಬಿಡುತ್ತಾರೆ. ಅವು ಪರಿಸರದಲ್ಲಿರುವ ಗಂಡು ಸೊಳ್ಳೆಗಳ ಜೊತೆ ಸಂಯೋಗಗೊಂಡು ಈ ರೋಗಗಳ(ಡೆಂಗಿ, ಚಿಕುನ್ ಗುನ್ಯಾ) ಸೋಂಕಿಲ್ಲದ ಲಾರ್ವಾಗಳನ್ನು ಉತ್ಪಾದಿಸುತ್ತವೆ ಎಂದು ವರದಿಯಾಗಿದೆ.


















