ಸುಳ್ಯ: ಇಲಿ ಪಾಷಾಣ ಸೇವಿಸಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಸುಳ್ಯ ಅಜ್ಜಾವರದ ಯುವತಿ ಏ.14 ರಂದು ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಮೃತಳನ್ನು ಅಜ್ಜಾವರ ಗ್ರಾಮದ ಮೂಲೆಮನೆ ಚಂದ್ರಹಾಸ ಅವರ ಪುತ್ರಿ ಜಯಲಕ್ಷ್ಮೀ (18) ಎಂದು ತಿಳಿದು ಬಂದಿದೆ.
ಏ.07ರಂದು ಮನೆಯಲ್ಲಿ ಇಲಿ ಪಾಷಾಣ ಸೇವಿಸಿದ ಜಯಲಕ್ಷ್ಮೀ ಅವರನ್ನು ಮನೆಯವರು ಸುಳ್ಯ ಆಸ್ಪತ್ರೆಗೆ ಕರೆತಂದಿದ್ದಾರೆ. ಚಿಕಿತ್ಸೆಯ ಬಳಿಕ ಏ.12 ರಂದು ಆಸ್ಪತ್ರೆಯಿಂದ ಮನೆಗೆ ಮರಳಿದ್ದರು. ಆದರೆ ಎ.13 ರಂದು ಮತ್ತೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ತಕ್ಷಣ ಆಕೆಯನ್ನು ಸುಳ್ಯ ಆಸ್ಪತ್ರೆಗೆ ಕರೆ ತರಲಾಯಿತು. ಇಲ್ಲಿನ ವೈದ್ಯರ ಸೂಚನೆ ಮೆರೆಗೆ ಮತ್ತೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಎ.14 ರಂದು ಆಕೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ಇಲಿಪಾಷಾಣ ಸೇವಿಸಿರುವುದಕ್ಕೆ ಕಾರಣ ಏನು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.


















