ಪಟ್ನಾ: ಬಿಹಾರದಲ್ಲಿ 60 ಅಡಿ ಉದ್ದದ ಉಕ್ಕಿನ ಸೇತುವೆಯನ್ನು ಅಕ್ರಮವಾಗಿ ಕೆಡವಿ, ಕದ್ದ ಆರೋಪದ ಮೇಲೆ ಇಬ್ಬರು ಸರ್ಕಾರಿ ಅಧಿಕಾರಿಗಳು ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಸಸರಾಮ್ ಜಿಲ್ಲೆಯ ಅರ್ರಾ ಕಾಲುವೆಗೆ ಅಡ್ಡಲಾಗಿ 1972ರಲ್ಲಿ ನಿರ್ಮಿಸಲಾಗಿದ್ದ 500 ಟನ್ ತೂಕದ ಉಕ್ಕಿನ ಸೇತುವೆಯನ್ನು ಇತ್ತೀಚೆಗೆ ಕದಿಯಲಾಗಿತ್ತು. ಸದ್ಯ ಸೆರೆಯಾದವರ ಪೈಕಿ ಉಪವಿಭಾಗಾಧಿಕಾರಿ ಮತ್ತು ಹವಾಮಾನ ಇಲಾಖೆಯ ಅಧಿಕಾರಿಯೂ ಇದ್ದಾರೆ. ಹವಾಮಾನ ಇಲಾಖೆಯ ಅಧಿಕಾರಿ ಅರವಿಂದ್ ಕುಮಾರ್ ಅವರು ಗ್ಯಾಸ್ ಕಟ್ಟರ್ ಮತ್ತು ಇತರ ಸಲಕರಣೆಗಳನ್ನು ಗುಂಪಿಗೆ ಪೂರೈಸಿರುವುದು ತನಿಖೆ ವೇಳೆ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ. ‘ಅಕ್ರಮ ಕಾರ್ಯಾಚರಣೆಗೆ ಬಳಸಲಾಗಿದ್ದ ಜೆಸಿಬಿ ಯಂತ್ರ, ಪಿಕ್‌ಅಪ್ ವ್ಯಾನ್, ಬಳಸಿದ್ದ ಗ್ಯಾಸ್ ಕಟ್ಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.


















