ಬಿಜೆಪಿ, ಕಾಂಗ್ರೆಸ್ ಗೆದ್ದಾಗ ಹೊಸತೇನೂ ಅನಿಸಲ್ಲ. ಏಕೆಂದರೆ ಇವು ರಾಷ್ಟ್ರೀಯ ಪಕ್ಷಗಳಾಗಿ ಬೆಳೆದು ಹೆಮ್ಮರವಾಗಿ ಹಲವು ದಶಕಗಳೇ ಕಳೆದಿವೆ. ಆದರೆ ಆಪ್ ನಂತಹ ಒಂದು ಪ್ರಾದೇಶಿಕ ಪಕ್ಷ 7 ದಶಕಗಳಿಂದ ಭದ್ರವಾಗಿ ನೆಲೆಯೂರಿದ್ದ ಕಾಂಗ್ರೆಸ್ ಪಕ್ಷವನ್ನು ಪಂಜಾಬ್ ನಿಂದ ಗುಡಿಸಿ ಹೊರ ಹಾಕಿದೆ ಎಂದರೆ ಆ ಗಟ್ಸ್ ಗೊಂದು ಚಪ್ಪಾಳೆ ಹೊಡೆಯಲೇಬೇಕು…
ಉತ್ತರ ಪ್ರದೇಶಕ್ಕಿಂತ ಥ್ರಿಲ್ಲಿಂಗ್ ಅಚ್ಚರಿಯ ರಿಸಲ್ಟ್ ಕೊಟ್ಟ ಆಪ್ ಬಗ್ಗೆ ನನಗೆ ವಿಶೇಷವಾದ ವ್ಯಾಮೋಹವಿಲ್ಲ. ಆದರೆ ಆಮ್ ಆದ್ಮಿ ಪಕ್ಷ ಜನರ ಪಕ್ಷವಾಗಿ ಇಷ್ಟೊಂದು ದೊಡ್ಡ ರೀತಿಯಲ್ಲಿ ಬೆಳೆದದ್ದು ಹೇಗೆ ಅನ್ನುವ ಸಹಜ ಕುತೂಹಲ ಇದ್ದೇ ಇದೆ. ಮೊದಲು ದಿಲ್ಲಿ, ಈಗ ಪಂಜಾಬ್…ಮುಂದೆ ಯಾವ ರಾಜ್ಯ ಕಬಳಿಸುತ್ತೋ ಯಾರಿಗೆ ಗೊತ್ತು…ಈಗ ಆಪ್ ಅನ್ನು ನಿರ್ಲಕ್ಷ್ಯಿಸಿ ಹೇಳಿಕೆ ನೀಡಿರುವ ನಮ್ಮ ಸಚಿವರಾದ ಅಶ್ಚತ್ಥ್ ನಾರಾಯಣ್ ಅವರು ಮುಂದೆ ಪಶ್ಚಾತಾಪ ಪಡಬೇಕಾಗಿಯೂ ಬರಬಹುದು..!
ಹೌದು, ಆಪ್ ಪಂಜಾಬ್ ಗೆಲುವಿನ ಕಾರಣ ನೋಡುತ್ತಾ ಹೋದರೆ ಮೊದಲನೆಯದಾಗಿ ಸಿಗುವುದು ದೆಹಲಿ ಮಾದರಿ ಸರಕಾರದ ಭರವಸೆ, ಎಲ್ಲರಿಗೂ ಉದ್ಯೋಗ, ಶಿಕ್ಷಣ , ಉಚಿತ ವಿದ್ಯುತ್ , ಯುವಕರು, ಮಹಿಳೆಯರಿಗಾಗಿ ವಿಶೇಷ ಯೋಜನೆ. ಹೀಗೆ ಹಲವು ನಂಬಿಕೆ ಆಪ್ ಅನ್ನು ಇಲ್ಲಿ ತನಕ ತಂದು ನಿಲ್ಲಿಸಿದೆ. ಆಮ್ ಅದ್ಮಿ ಪಕ್ಷ 2012 ರಲ್ಲಿ ಸ್ಥಾಪನೆಗೊಂಡು ಈ ತನಕ ಎರಡು ರಾಜ್ಯಗಳನ್ನು ಗೆದ್ದಿರುವುದಕ್ಕೆ ಹೋಲಿಕೆ ಮಾಡಿಕೊಂಡರೆ ಬಿಜೆಪಿ ತನ್ನ ಸ್ಥಾಪನೆಯ ವರ್ಷದಿಂದ ಎರಡು ರಾಜ್ಯಗಳನ್ನು ಗೆಲ್ಲುವುದಕ್ಕೆ ಬಹಳಷ್ಟು ಸಮಯ ತೆಗೆದುಕೊಂಡಿತ್ತು.. ಹಾಗೆ ನೋಡುವುದಾದರೆ ಆಪ್ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಪಕ್ಷ. ಸದ್ಯ ಆಮ್ ಆದ್ಮಿ ಪಕ್ಷ ಪಂಜಾಬ್ ನ ಆರ್ಥಿಕತೆ ಹಾಗೂ ಗತವೈಭವವನ್ನು ಮರಳಿ ತರುವ ನಿಟ್ಟಿನಲ್ಲಿ ನೀಲನಕ್ಷೆ ತಯಾರಿಸಿದೆ. ಭಗವಂತ್ ಸಿಂಗ್ ಮಾನ್ ಅವರು ಕೇಜ್ರಿವಾಲ್ ರೀತಿಯಲ್ಲಿ ಸಾಗಿದರೆ ಆಪ್ ಬಲಿಷ್ಠ ವಾಗಿ ಹೊರ ಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ.
ಆಪ್ ನಂತಹ ಪಕ್ಷ ಹಣ, ತೊಳ್ ಬಲವಿಲ್ಲದೆ ಜನಪರ ಕೆಲಸಗಳಿಂದ ಅಧಿಕಾರ ಹಿಡಿಯುವುದು ಸಣ್ಣ ವಿಚಾರವಲ್ಲ. ನಿಜವಾದ ಗಟ್ಸ್…ಮೀಟ್ರು..ಧಮ್ ಅಂತಿವಲ್ಲ ಅದೆಲ್ಲ ಇದ್ದರೆ ಮಾತ್ರ ಇಂತಹ ಸಾಧನೆ ಸಾಧ್ಯ. ಹೀಗೆ ಸಾಗಿದರೆ ಆಪ್ ಹಲವು ರಾಜ್ಯಗಳಲ್ಲಿ ಮುಂದೆ ಅಧಿಕಾರ ಹಿಡಿಯಲೂಬಹುದು..ಆಗ ಅರವಿಂದ್ ಕೇಜ್ರಿವಾಲ್ ದೇಶದ ಪ್ರಧಾನಿ ಅಭ್ಯರ್ಥಿಯಾಗಿರುತ್ತಾರೆ ಅನ್ನುವುದು ಸತ್ಯ….


















