ಬಜಪೆ: ಬಾಲಕಿಯನ್ನು ನಂಬಿಸಿ ಮನೆಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಹತ್ತು ವರ್ಷದ ಬಳಿಕ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿಯ ಕನ್ನಡಿಕಟ್ಟೆ-ಮೇಲಂತಬೆಟ್ಟು ನಿವಾಸಿ ಮನೋಜ್ ಬಿ. ಶೆಟ್ಟಿ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. 2011ರ ಜೂನ್ 24ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಚ್ಚೂರಿನಲ್ಲಿ ಪ್ರಕರಣ ನಡೆದಿತ್ತು. ಬಾಲಕಿಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯ ಪತ್ತೆಗೆ ಪೊಲೀಸರು ನಿರಂತರ ಶೋಧ ನಡೆಸುತ್ತಿದ್ದರು. ಇದೀಗ 10 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಮನೋಜ್ ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.










