ನ್ಯೂಸ್ ನಾಟೌಟ್: ಎಷ್ಟೋ ಸಲ ಪ್ರಾಣಿ ಪಕ್ಷಿಗಳು ತೋರಿಸುವ ಪ್ರೀತಿ, ನಿಯತ್ತು ಮನುಷ್ಯರಿಗೆ ಇರುವುದಿಲ್ಲ. ಪ್ರಾಣಿಗಳು ಕೂಡ ತನ್ನ ಮರಿಗಳ ಕಾಳಜಿ ಮಾಡುವಂತೆ ಬೇರೆ ಪ್ರಾಣಿಗಳ ಮರಿಗಳನ್ನು ಕಾಳಜಿ ಮಾಡುತ್ತವೆ. ಈ ಮೂಲಕ ತಾಯಿ ಎಂದಿಗೂ ತಾಯಿಯೇ ಎಂಬುದನ್ನು ಹಲವು ಬಾರಿ ಸಾಬೀತುಪಡಿಸಿವೆ. ಪರಸ್ಪರ ಪ್ರೀತಿ ತೋರುವ ಪ್ರಾಣಿ ಪಕ್ಷಿಗಳ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದೇ ರೀತಿ ಈಗ ತಾಯಿ ಕೋಳಿ ಹಾಗೂ ಮರಿಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕೋಳಿಯೊಂದು ತನ್ನ ರೆಕ್ಕೆಗಳಡಿ ಮರಿಗಳಿಗೆ ರಕ್ಷಣೆ ನೀಡುತ್ತಾ ಬುಟ್ಟಿಯೊಂದರಲ್ಲಿ ಕುಳಿತಿರುತ್ತದೆ. ಇದೇ ಬುಟ್ಟಿಯಲ್ಲಿ ಎರಡು ಪುಟಾಣಿ ನಾಯಿಮರಿಗಳಿದ್ದು ಅವುಗಳು ಕೂಡ ಆಶ್ರಯಕ್ಕಾಗಿ ಕೋಳಿಯ ರೆಕ್ಕೆಗಳಡಿ ನುಗ್ಗಲು ನೋಡುತ್ತವೆ. ಅಲ್ಲದೇ ಅಲ್ಲೇ ಆಶ್ರಯ ಪಡೆಯುತ್ತವೆ. ಆದರೆ ತನ್ನದಲ್ಲದ ಈ ನಾಯಿಮರಿಗಳನ್ನು ನೋಡಿ ಕೋಳಿ ಅವುಗಳನ್ನು ದೂರ ಸರಿಸುವುದಿಲ್ಲ. ಪ್ರತಿಯಾಗಿ ಅವುಗಳಿಗೆ ತನ್ನ ಮರಿಗಳಂತೆ ತನ್ನ ರೆಕ್ಕೆಗಳಡಿ ಆಶ್ರಯ ನೀಡುತ್ತದೆ. ಆದರೆ ಹತ್ತಿರ ನಿಂತಿದ್ದ ಹುಂಜ ಮಾತ್ರ ಇದನ್ನು ನೋಡಿ ದಂಗಾಗಿದ್ದು, ಹೇಂಟೆ ಕೋಳಿಯನ್ನೇ ನೋಡುತ್ತಾ ಗೊಂದಲದಿಂದ ನಿಂತಿದೆ.
ಇತ್ತ ನಾಯಿಮರಿಗಳು ಕೋಳಿಯಲ್ಲೇ ತಮ್ಮ ತಾಯನ್ನು ಕಂಡಿದ್ದು, ತಾಯಿ ಕೋಳಿಯ ರೆಕ್ಕೆಗಳಡಿ ನೆಮ್ಮದಿಯಿಂದ ಮಲಗಿವೆ. @Yoda4ever ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವಿಡಿಯೋ ಅಪ್‌ಲೋಡ್ ಆಗಿದ್ದು ಲಕ್ಷಾಂತರ ಜನ ಈ 10 ಸೆಕೆಂಡ್‌ಗಳ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


















