ನ್ಯೂಸ್ ನಾಟೌಟ್: ಯಶಸ್ವಿ ಕೇಂದ್ರ ಬಜೆಟ್ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್ ಸೀರೆಯ ಮೇಲೆಯೇ ಇದೀಗ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಅದರಲ್ಲೂ ಮಹಿಳೆಯರು ಎಷ್ಟು ಚೆಂದದ ಸೀರೆಯಿದು, ರೀ…ನಾನು ತಗೋಬೇಕು ಎಂದು ತಮ್ಮ ಗಂಡಂದಿರಿಗೆ ಗಾಳ ಹಾಕಿಯೇ ಬಿಟ್ಟಿದ್ದಾರೆ. ಆದರೆ ಈ ಸೀರೆ ಅತ್ಯಂತ ದುಬಾರಿಯದ್ದು ಅನ್ನುವ ಮಾಹಿತಿ ಇದೀಗ ಹೊರಬಿದ್ದಿದೆ.
ಈ ಸೀರೆ ತಯಾರಾಗಿದ್ದು ಕರ್ನಾಟಕದಲ್ಲಿ ಅನ್ನುವುದು ವಿಶೇಷ. ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು ಬಣ್ಣದ ಇಳಕಲ್ ರೇಷ್ಮೆ ಸೀರೆಯಿದು. ಈ ಸೀರೆಯುಟ್ಟು ನಿರ್ಮಲಾ ಸೀತಾರಾಮನ್ ಫುಲ್ ಮಿಂಚಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಸೀರೆ ಉಡುವುದಕ್ಕೆ ಸುಲಭ. ಆದರೆ ಇದನ್ನು ತಯಾರಿಸಲು ಧಾರವಾಡದ ನಾರಾಯಣಪುರದಲ್ಲಿರುವ ಆರತಿ ಹಿರೇಮಠ ಮಾಲೀಕತ್ವದ ಆರತಿ ಕ್ರಾಫ್ಟ್‌ನ 210 ಮಹಿಳಾ ಕಾರ್ಮಿಕರು ಕೆಲಸ ಮಾಡಿದ್ದಾರೆ. ನಿರ್ಮಲಾ ಅವರ ಅಭಿರುಚಿಗೆ ತಕ್ಕಂತೆ ಹಲವು ಸೀರೆಗಳನ್ನು ಮಾಡಿ ಕಳುಹಿಸಿಕೊಡಲಾಗಿತ್ತು. ಆ ಸೀರೆಗಳ ಪೈಕಿ ನಿರ್ಮಲಾ ಅವರು ಈ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಆರತಿ ಹಿರೇಮಠ ತಿಳಿಸಿದ್ದಾರೆ.


















