ನ್ಯೂಸ್ ನಾಟೌಟ್: ಗುಜರಾತ್‌ನ ‘ಅಮುಲ್’ ಜತೆಗೆ ಕರ್ನಾಟಕ ಹಾಲು ಮಹಾಮಂಡಳವನ್ನು (ಕೆಎಂಎಫ್ –ನಂದಿನಿ) ಒಂದುಗೂಡಿಸುವ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಹೇಳಿಕೆಗೆ ರಾಜ್ಯದಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದು, ‘ವಿಲೀನ‘ ಪ್ರಸ್ತಾವವನ್ನು ಬಹುತೇಕ ಮಂದಿ ಖಂಡಿಸಿದ್ದು, ತೀವ್ರವಾಗಿ ಆಕ್ಷೇಪಿಸಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಗೆಜ್ಜಲಗೆರೆಯಲ್ಲಿರುವ ಜಿಲ್ಲಾ ಹಾಲು ಒಕ್ಕೂಟದ (ಮನ್ ಮುಲ್) ಆವರಣದಲ್ಲಿ ಮೆಗಾ ಡೇರಿ ಉದ್ಘಾಟಿಸಿ ಶುಕ್ರವಾರ ಮಾತನಾಡಿದ್ದ ಶಾ, ‘1975ರಿಂದಲೂ ಕೆಎಂಎಫ್ ಅಭಿವೃದ್ಧಿ ಹೊಂದುತ್ತಿದೆ. ಅಂತೆಯೇ ಗುಜರಾತ್ ಸಹಕಾರ ಒಕ್ಕೂಟವೂ ಪ್ರಗತಿಯ ಹಾದಿಯಲ್ಲಿದೆ. ‘ಅಮುಲ್’ ಹಾಗೂ ‘ನಂದಿನಿ’ ಒಂದಾದರೆ ಹಾಲು ಉತ್ಪಾದಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ’ ಎಂದಿದ್ದರು. ಅಮಿತ್ ಶಾ ಅವರ ಹೇಳಿಕೆಯನ್ನು ವಿರೋಧಿಸಿ ಜಾಲತಾಣಗಳಲ್ಲಿ ಸಂದೇಶ ಹಾಕಿರುವ ಹಲವರು, ‘ಕರ್ನಾಟಕದ ಅಸ್ಮಿತೆಯಾಗಿರುವ ‘ನಂದಿನಿ’ ಬ್ರ್ಯಾಂಡ್ ಮೇಲೆ ಅಮಿತ್ ಶಾ ಕಣ್ಣು ಬಿದ್ದಿದೆ ಎಂದು ವ್ಯಾಖ್ಯಾನಿಸಿದ್ದಾರೆ. ‘ರಾಜ್ಯದಲ್ಲಿ ಜೀವಂತವಾಗಿರುವ ಸಹಕಾರ ವ್ಯವಸ್ಥೆಯ ಖಾಸಗೀಕರಣ ಹುನ್ನಾರದಿಂದಲೇ ಶಾ ಈ ಮಾತು ಹೇಳಿದ್ದಾರೆ. ಈಗಾಗಲೇ ಕರ್ನಾಟಕ ಮೂಲದ ಬ್ಯಾಂಕ್‌ಗಳನ್ನು ಇತರ ಬ್ಯಾಂಕ್‌ಗಳೊಂದಿಗೆ ವಿಲೀನ ಮಾಡಿದ್ದಾಗಿದೆ. ಈಗ ಕೆಎಂಎಫ್ ಅನ್ನೂ ಕಾರ್ಪೊರೇಟ್ ಕಂಪನಿಗೆ ನೀಡಲು ಷಡ್ಯಂತ್ರ ರೂಪಿಸಿದ್ದಾರೆ’ ಎಂದಿದ್ದಾರೆ.


















